ಕರ್ನಾಟಕ ಸರ್ಕಾರದ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಇದೇ ತಿಂಗಳು ಫೆಬ್ರವರಿ 24 ಮತ್ತು 25ರಂದು ಎರಡು ದಿನಗಳ ಕಾಲ ಕೋಲಾರದ ಜೂನಿಯರ್ ಕಾಲೇಜು ಮೈದಾನ ಮತ್ತು ಟಿ. ಚನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಕೋಲಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ವಿಶೇಷ ಘಟಕ ಯೋಜನೆಯಡಿ ವೇದಿಕೆಯನ್ನು ಕಲ್ಪಿಸಲು ಇದೇ ಮೊಟ್ಟ ಮೊದಲ ಬಾರಿಗೆ ರಾಜ್ಯ ಮಟ್ಟದ ಜನಪರ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ.
ಕರ್ನಾಟಕ ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸುತ್ತಿರುವ ಪರಿಶಿಷ್ಟ ಜಾತಿ ಸಮುದಾಯದವರ ಜಾನಪದ ಕಲೆಗಳಾದ ಕಹಳೆ, ಡೊಳ್ಳು, ಗೀಗಿ ಪದಗಳು, ಕೋಲಾಟ, ಕೊಂಬು ಕಹಳೆ, ವೀರಗಾಸೆ, ಪೂಜಾ ಕುಣಿತ, ತಮಟೆ, ಉರುಮೆ, ಲಾವಣಿ ಪದಗಳು, ಜಾನಪದ ನೃತ್ಯ, ನಂದಿ ಧ್ವಜ, ಗೊರಕನ ನೃತ್ಯ, ಶಹನಾಯಿ, ಜಗ್ಗಲಿಗೆ, ಹುಲಿ ವೇಷ, ಚಾಂಜ್ ಮೇಳ, ಹಗಲು ವೇಷ, ಮರಗಾಲು ಕುಣಿತ, ಕರಡಿ ಮಜಲು, ಗಾರುಡಿ ಗೊಂಬೆ, ಹಾಲಕ್ಕಿ ಸುಗ್ಗಿ ಕುಣಿತ, ಖಣಿವಾದನ, ಚಿಟ್ಟಿ ಮೇಳ, ಕಂಸಾಳೆ, ಸೋಮನ ಕುಣಿತ, ನಗಾರಿ, ಕೀಲು ಕುದುರೆ, ಲಂಬಾಣಿ ನೃತ್ಯ ಇನ್ನೂ ಮುಂತಾದ ಕಲೆಗಳ ಪ್ರದರ್ಶನವನ್ನು ಕಣ್ತುಂಬಿಕೊಳ್ಳಲು ಸದಾವಕಾಶ.
ಆದ್ದರಿಂದ ಕೋಲಾರ ಜಿಲ್ಲೆಯ ಸಂಘ ಸಂಸ್ಥೆಗಳು, ಸಾರ್ವಜನಿಕರು, ರೈತ ಬಂಧುಗಳು, ಮಹಿಳೆಯರು, ಶಾಲಾ ಕಾಲೇಜು ವಿದ್ಯಾರ್ಥಿ ನಿಯರು, ಕಲಾಭಿಮಾನಿಗಳು, ಎಲ್ಲಾ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ.