ಕೋಲಾರ ಕರ್ನಾಟಕ ರಾಜ್ಯದ ಒಂದು ಜಿಲ್ಲೆ. ಕೋಲಾರ ನಗರ ಈ ಜಿಲ್ಲೆಯ ಕೇಂದ್ರಸ್ಥಾನ. ಕೋಲಾರ ಗಂಗರ ರಾಜಧಾನಿಯಾಗಿತ್ತು ಇದನ್ನು ಮೊದಲು ಕುವಲಾಲಪುರ ಅಂತಲೂ ಕರೆಯುತ್ತಿದ್ದರು. ಕಾಲ ಕ್ರಮೇಣ ಕೋಲಾರವಾಯಿತು. ಗಂಗರು ಕಟ್ಟಿಸಿದಂತ ಹಲವಾರು ಸ್ಥಳಗಳು ಕೋಲಾರದಲ್ಲಿ ಮತ್ತು ಕೋಲಾರ ಜಿಲ್ಲೆಯಲ್ಲಿವೆ ಅದರಲ್ಲೂ ಮುಖ್ಯವಾಗಿ ಗಂಗರು ಕಟ್ಟಿಸಿದ ಕೋಲಾರಮ್ಮ ದೇವಾಲಯ ಜಿಲ್ಲೆಯಲ್ಲಿಯೆ ಪ್ರಸಿದ್ದಿಯನ್ನು ಪಡೆದಿದೆ. ನಾಡಿಗೆ ಮತ್ತು ರಾಷ್ಟ್ರಕ್ಕೆ ತನ್ನೊಡಲ ಚಿನ್ನವನ್ನು ಧಾರೆಯೆರೆದು ‘ಚಿನ್ನದ ಜಿಲ್ಲೆ’ ಎಂದೇ ಹೆಸರಾಗಿದ್ದ ಕೋಲಾರ ಜಿಲ್ಲೆಯು ನಾಡಿನ ಕೃಷಿ, ಸಾಹಿತ್ಯ, ರಾಜಕೀಯ ಹಾಗೂ ವಿಜ್ಞಾನ ತಂತ್ರಜ್ಞಾನ ಕ್ಷೇತ್ರಗಳಿಗೆ ವಿಶಿಷ್ಟ ಕೊಡುಗೆ ನೀಡಿದ ಗೌರವಕ್ಕೆ ಪಾತ್ರವಾಗಿದೆ. ಸಿಲ್ಕ್ ಅಂಡ್ ಮಿಲ್ಕ್, ಹಣ್ಣು ಮತ್ತು ತರಕಾರಿಗಳ ರಾಜಧಾನಿ ಎನಿಸಿರುವ ಕೋಲಾರ ಜನಪರ ಹೋರಾಟಗಳು ಮತ್ತು ಜನಪರ ಸಂಸ್ಕೃತಿಯನ್ನು ಮೆರೆದಿದೆ .ಕೋಲಾರ ಜಿಲ್ಲೆಯ ಮುಖ್ಯ ಕಸುಬುಗಳೆ೦ದರೆ ಕೃಷಿ, ಪಶು ಸಾಕಾಣಿಕೆ ಹಾಗೂ ರೇಷ್ಮೆ ಉದ್ಯಮ.
ಐತಿಹಾಸಿಕವಾಗಿ ಕೋಲಾರವು ೨ನೇ ಶತಮಾನದಲ್ಲಿಯೇ ಗಂಗರ ರಾಜಧಾನಿಯಾಗಿದ್ದು, ನಂತರ ಚೋಳರ ಆಳ್ವಿಕೆಗೆ ಒಳಪಟ್ಟಿದೆ. ೪ ರಿಂದ ೧೯ನೇ ಶತಮಾನದವರೆಗೆ ಕದಂಬ, ಗಂಗ, ಪಲ್ಲವ, ಚೋಳ, ಚಾಲುಕ್ಯ, ಹೊಯ್ಸಳ, ರಾಷ್ಟ್ರಕೂಟ ಅರಸರು, ಮೈಸೂರಿನ ಅರಸರು, ಪಾಳೇಗಾರರು ಹೈದರಾಲಿ ಹಾಗೂ ಟಿಪ್ಪು ಸುಲ್ತಾನರ ಆಳ್ವಿಕೆಗೆ ಒಳಪಟ್ಟಿತ್ತು.
೨೦೧೧ ರ ಜನಗಣತಿ ಪ್ರಕಾರ, ಕೋಲಾರ ಜಿಲ್ಲೆಯ ಜನಸಂಖ್ಯೆಯು 1,536,401 ಆಗಿದೆ ಹಾಗು ಇದರಲ್ಲಿ ಪುರುಷರ ಸಂಖ್ಯೆ 776,396 ಹಾಗು ಸ್ತೀಯರ ಸಂಖ್ಯೆ 760,005 ಇದೆ.