ಕೋಲಾರಮ್ಮ ದೇವಸ್ಥಾನ
ಗಂಗರ ರಾಜಧಾನಿಯಾಗಿದ್ದ ಕೋಲಾರ ನಗರದಲ್ಲಿ ಕಲೆ, ಸಂಸ್ಕೃತಿಗಳ ಸಾಕಾರರೂಪ ತಳೆದ ಸ್ಮಾರಕಗಳಿದ್ದು, ನಗರದ ಪೂರ್ವಕ್ಕೆ ಇರುವ ಕೋಲಾರಮ್ಮ ದೇವಾಲಯ ಶಿಲ್ಪ ಕಲೆಯು ಉತ್ತಮ ಉದಾಹರಣೆ. ಲಂಬಕೋನಾಕೃತಿಯ ವಾಸ್ತು ಶಿಲ್ಪವನ್ನು ಹೊಂದಿರುವ ಜೋಡಿ ಮಂದಿರಗಳಿಂದ ಕೂಡಿದ ಸಾವಿರ ವರ್ಷಗಳ ಹಿಂದಿನ ಈ ಅಲಯಕ್ಕೆ ಒಂದೇ ಮುಖಮಂಟಪವಿರುವುದು ವೈಶಿಷ್ಟ್ಯ.
ಉತ್ತರ ದೇವಮಂದಿರದಲ್ಲಿ ದಕ್ಷಿಣ ದಿಕ್ಕಿಗೆ ಮುಖ ಮಾಡಿರುವ ಶಕ್ತಿ ಸ್ವರೂಪಿಣಿ ಚಾಮುಂಡೇಶ್ವರಿ, ನಗರಾಧೀದೇವತೆ ಕೋಲಾರಮ್ಮ ಆಗಿದ್ದಾಳೆ. ಅಲ್ಲಿಯೇ ಕಲ್ಲಿನ ಸಪ್ತಮಾತೃಕೆಯರು, ಶ್ರೀ ಚಕ್ರವಿದೆ. ದಕ್ಷಿಣದ ದೇವಮಂದಿರದಲ್ಲಿ ಸಪ್ತಮಾತೃಕೆಯರ ಬೃಹತ್ ಮೃತ್ತಿಕಾ (ಗಾರೆ) ವಿಗ್ರಹಗಳಿವೆ ನೆರಳಿನಲ್ಲಿ ಮೂರು ಮುಖ ತೋರುವ ವಿಶಿಷ್ಟ ಕರ್ಣ ಗಣಪತಿ ವಿಗ್ರಹ ಶಿಲ್ಪಿಯ ಚಮತ್ಕಾರ ತೋರುತ್ತದೆ. ಹಲವು ತಮಿಳು, ಕನ್ನಡ ಶಾಸನಗಳು ಇಲ್ಲಿದೆ.