ಮುಚ್ಚಿ

ಜಿಲ್ಲೆಯ ಬಗ್ಗೆ

ನಾಡಿಗೆ ಮತ್ತು ರಾಷ್ಟ್ರಕ್ಕೆ ತನ್ನೊಡಲ ಚಿನ್ನವನ್ನು ಧಾರೆಯೆರೆದು ‘ಚಿನ್ನದ ಜಿಲ್ಲೆ’ ಎಂದೇ ಹೆಸರಾಗಿದ್ದ ಕೋಲಾರ ಜಿಲ್ಲೆಯು ನಾಡಿನ ಕೃಷಿ, ಸಾಹಿತ್ಯ, ರಾಜಕೀಯ ಹಾಗೂ ವಿಜ್ಞಾನ ತಂತ್ರಜ್ಞಾನ ಕ್ಷೇತ್ರಗಳಿಗೆ ವಿಶಿಷ್ಟ ಕೊಡುಗೆ ನೀಡಿದ ಗೌರವಕ್ಕೆ ಪಾತ್ರವಾಗಿದೆ. ಸಿಲ್ಕ್ ಅಂಡ್ ಮಿಲ್ಕ್, ಹಣ್ಣು ಮತ್ತು ತರಕಾರಿಗಳ ರಾಜಧಾನಿ ಎನಿಸಿರುವ ಕೋಲಾರ ಜನಪರ ಹೋರಾಟಗಳು ಮತ್ತು ಜನಪರ ಸಂಸ್ಕೃತಿಯನ್ನು ಮೆರೆದಿದೆ . ಆಗಸ್ಟ್ ೨೦೦೭ರಂದು ಚಿಕ್ಕಬಳ್ಳಾಪುರ ಉಪವಿಭಾಗವು ಸ್ವತಂತ್ರ ಜಿಲ್ಲೆಯಾಗಿ ಕೋಲಾರದಿಂದ ವಿಭಜನೆ ಹೊಂದಿದೆ.ಕೋಲಾರ ಜಿಲ್ಲೆಯ ಮುಖ್ಯ ಕಸುಬುಗಳೆಂದರೆ ಕೃಷಿ, ಪಶು ಸಾಕಾಣಿಕೆ ಹಾಗೂ ರೇಷ್ಮೆ ಉದ್ಯಮ.

ಕೋಲಾರ ಮತ್ತು ಸೋಮೇಶ್ವರವು ಕೋಲಾರದಲ್ಲಿರುವ ಗಮನಾರ್ಹ ದೇವಾಲಯಗಳಾಗಿವೆ. ಎರಡನೆಯ ಶತಮಾನದಲ್ಲಿ ದ್ರಾವಿಡ ವಿಮಾನಾ ಶೈಲಿಯಲ್ಲಿ ನಿರ್ಮಿಸಲಾದ ಕೊಲಾರಮ್ಮ ದೇವಸ್ಥಾನವನ್ನು ಶಕ್ತಿ ದೇವತೆಗಾಗಿ ಸಮರ್ಪಿಸಲಾಗಿದೆ. ಇದು 10 ನೇ ಶತಮಾನದಲ್ಲಿ ರಾಜೇಂದ್ರ ಚೋಳ I ರವರ ಅಡಿಯಲ್ಲಿ ಮತ್ತು 15 ನೇ ಶತಮಾನದಲ್ಲಿ ವಿಜಯನಗರ ರಾಜರ ಅಡಿಯಲ್ಲಿ ನವೀಕರಣಕ್ಕೆ ಒಳಗಾಯಿತು. ಸೋಮೇಶ್ವರ ದೇವಸ್ಥಾನ 14 ನೇ ಶತಮಾನದ ವಿಜಯನಗರ ಕಲೆಯ ಉದಾಹರಣೆಯಾಗಿದೆ.

ಐತಿಹಾಸಿಕವಾಗಿ ಕೋಲಾರವು ೨ ನೇ ಶತಮಾನದಲ್ಲಿಯೇ ಗಂಗರ ರಾಜಧಾನಿಯಾಗಿದ್ದು, ನಂತರ ಚೋಳರ ಆಳ್ವಿಕೆಗೆ ಒಳಪಟ್ಟಿದೆ. ೪ ರಿಂದ ೧೯ ನೇ ಶತಮಾನದವರೆಗೆ ಕದಂಬ, ಗಂಗ, ಪಲ್ಲವ, ಚೋಳ, ಚಾಲುಕ್ಯ, ಹೊಯ್ಸಳ, ರಾಷ್ಟ್ರಕೂಟ ಅರಸರು, ಮೈಸೂರಿನ ಅರಸರು, ಪಾಳೇಗಾರರು ಹೈದರಾಲಿ ಹಾಗೂ ಟಿಪ್ಪು ಸುಲ್ತಾನರ ಆಳ್ವಿಕೆಗೆ ಒಳಪಟ್ಟಿತ್ತು. ಕೋಲಾರ ಜಿಲ್ಲೆ ಆಂಧ್ರದ ಗಡಿಯಲ್ಲಿದ್ದು ಭಾಷಿಕ ಪ್ರಭಾವ ಕಂಡುಬರುತ್ತದೆ. ಈ ಜಿಲ್ಲೆಗಳ ಆಡಳಿತ ಹಾಗೂ ಶಿಕ್ಷಣದ ಭಾಷೆ ಕನ್ನಡವೇ ಆಗಿದ್ದರೂ ಸಹ ಸಾಮಾಜಿಕ ವ್ಯವಹಾರದಲ್ಲಿ ತೆಲುಗು ಭಾಷೆ ಬಳಕೆಯಲ್ಲಿದೆ.ಹಾಗೂ ಎಲ್ಲ ಭಾಷಿಗರು ಕನ್ನಡವನ್ನು ಗೌರವಿಸುತ್ತಾರೆ, ಕೋಲಾರದ ಎಲ್ಲದರಲ್ಲೂ ಕನ್ನಡವೇ ಇದ್ದರೂ ಹಲವು ತೆಲುಗರು ಇರುವ ಕಾರಣ ತೆಲುಗಿನ ಛಾಯೆ ಕಂಡುಬರುತ್ತದೆ.